ನಂದಗಡ
	ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಒಂದು ಪಟ್ಟಣ. ಬೆಳಗಾಂವಿ-ಹಳಿಯಾಳ ರಸ್ತೆಯಲ್ಲಿ ಖಾನಾಪುರಕ್ಕೆ ಸು.11 ಕಿಮೀ. ಹಾಗೂ ಬೆಳಗಾಂವಿ ನಗರದ ದಕ್ಷಿಣಕ್ಕೆ 37 ಕಿಮೀ. ದೂರದಲ್ಲಿ ಉ.ಅ. 15 34 ಮತ್ತು ಪೂ.ರೇ. 74 35 ಮೇಲೆ ಇದೆ. 19ನೆಯ ಶತಮಾನದಲ್ಲಿ ಇದು ಪ್ರಸಿದ್ಧ ವ್ಯಾಪಾರಸ್ಥಳವಾಗಿತ್ತು. ಖಾನಾಪುರದ ಬೆಳವಣಿಗೆಯಿಂದ ಇದರ ಪ್ರಾಮುಖ್ಯ ಈಗ ಸ್ವಲ್ಪ ತಗ್ಗಿದೆ. 1881ರಲ್ಲಿ ಇದರ ಜನಸಂಖ್ಯೆ 7,912 ಇತ್ತು; 1971ರಲ್ಲಿ 1365.

	ನಂದಗಡಕ್ಕೆ ಸಮೀಪದ ಪ್ರತಾಪಗಡ ಕೋಟೆಯನ್ನು ಕಿತ್ತೂರಿನ ಪಾಳೆಯಗಾರ ಮಲ್ಲ ಸರ್ಜ ದೇಸಾಯಿ 1809ರಲ್ಲಿ ಕಟ್ಟಿಸಿದ. ಈತ ಪೇಷ್ವೆ ಬಾಜಿರಾಯನ(1796-1818) ಸಾಮಂತನಾಗಿದ್ದ. ಅವನಿಂದ ಪ್ರತಾಪದೇವನೆಂಬ ಬಿರುದು ಪಡೆದ ಸ್ಮರಣಾರ್ಥವಾಗಿ ಈ ಕೋಟೆಯನ್ನು ನಿರ್ಮಿಸಿದ್ದ. ಖಾನಾಪುರದ ವ್ಯಾಪಾರಿಗಳು ಇಲ್ಲಿ ನೆಲೆಸುವಂತೆ ಉತ್ತೇಜನ ನೀಡಿ 9 ವರ್ಷಗಳ ಕಾಲ ಅವರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ. 1829ರಲ್ಲಿ ಕಿತ್ತೂರಿನ ಸ್ವಾತಂತ್ರ್ಯವೀರ ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಿದರೆ. ರಾಯಣ್ಣ ಮರಣವನ್ನುಪ್ಪುವುದಕ್ಕೆ ಮುಂಚೆ ನುಡಿದಂತೆ ಅವನ ಸಮಾಧಿಯ ಬಳಿ ಆಲದ ಮರವೊಂದು ಬೆಳೆದಿದೆ. ಅಲ್ಲಿ ಗುಡಿಯೊಂದನ್ನು ಕಟ್ಟಿದ್ದಾರೆ. ಮಕ್ಕಳಿಲ್ಲದವರು ಹಾಗೂ ಹರಕೆ ಹೊತ್ತವರು ಅಲ್ಲಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ನಂದಗಡದ ಮಾರುಕಟ್ಟೆಗೆ ಸರಕನ್ನು ಸಾಗಿಸುವ ವರ್ತಕರು ಸಹ ರಾಯಣ್ಣನ ಸಮಾಧಿಯ ಬಳಿ ತಂಗಿ ಗುಡಿಗೆ ಕಾಣಿಕೆ ಸಲ್ಲಿಸುವುದುಂಟು. ನಂದಗಡಕ್ಕೆ 2 ಕಿಮೀ. ದೂರದಲ್ಲಿರುವ ಷಂಷೇರ್‍ಗಢದಲ್ಲಿ ಜಕಣಾಚಾರಿ ಕಟ್ಟಿಸಿದನೆಂದು ಹೇಳಲಾದ ತಾಟೇಶ್ವರನ ಗುಡಿ ಇದೆ.

	ನಂದಗಡದ ಸುತ್ತಣದು ಸಮತಲಭೂಮಿ. ಅಲ್ಲಲ್ಲಿ ಬೆಟ್ಟಗಳಿವೆ. ಕಪ್ಪುಮಣ್ಣು ಸಾಗುವಳಿಗೆ ಯೋಗ್ಯವಾಗಿದೆ. ವಾಯುಗುಣ ಬೇಸಗೆಯಲ್ಲಿ ಹಿತಕರ. ವಾರ್ಷಿಕ ಸರಾಸರಿ ಮಳೆ 1,803 ಮಿಮೀ. ಜೂನ್ ತರುವಾಯ ಇಲ್ಲಿ ಬಿತ್ತನೆಯಾಗುತ್ತದೆ. ಮುಖ್ಯ ಬೆಳೆಗಳು ಜೋಳ, ಬಾಜ್ರ, ಗೋದಿ, ಹತ್ತಿ. ಇಲ್ಲಿಯ ಜನರ ಮುಖ್ಯ ಆಹಾರ ಜೋಳ. ಈ ಸುತ್ತಿನಲ್ಲಿ ಮಾವು, ಹುಣಸೆ, ಹಲಸು, ಸೀತಾಫಲ ಬೆಳೆಯುತ್ತದೆ. ಅರಬ್ಬಿ ಸಮುದ್ರದ ರೇವುಗಳೊಂದಿಗೆ ಹಾಗೂ ಒಳನಾಡಿನ ಪಟ್ಟಣಗಳೊಂದಿಗೆ ನಂದಗಡಕ್ಕೆ ವ್ಯಾಪಾರ ಸಂಪರ್ಕವಿದೆ. ತೆಂಗು, ಅಡಕೆ, ಕೊಬ್ಬರಿ ಎಣ್ಣೆ, ಉಪ್ಪು, ಖರ್ಜೂರ ಇಲ್ಲಿಗೆ ಬರುತ್ತದೆ. ಹತ್ತಿ ಇಲ್ಲಿಂದ ಹೊರಹೋಗುವ ಮುಖ್ಯ ಸರಕು. ನಂದಗಡಕ್ಕೆ ಅತ್ಯಂತ ಸಮೀಪದ ರೈಲ್ವೆನಿಲ್ದಾಣ ಬೆಳಗಾಂವಿ-ಲೋಂಡಾ ರೈಲುಮಾರ್ಗದ ಮೇಲಿರುವ ಖಾನಾಪುರ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ